ಚೆನ್ನಗಿರಿ ಚಾರಣ - Channagiri Trek
೪.೪೫ಕ್ಕೆ ಅಲಾರಂ ತನ್ನ ರಾಗ ಶುರುಹಚ್ಚಿಕೊಂಡಾಗ ಅದನ್ನು ಸ್ನೂಜ್ ಮಾಡಿ ಪಕ್ಕಕ್ಕೆ ಹೊರಳಿ ಮಲಗಿದೆ. ೧೦ ನಿಮಿಷ ಬಿಟ್ಟು ಅದು ಮತ್ತೊಮ್ಮೆ ಅರಚಿಕೊಳ್ಳತೊಡಗಿದ ಮೇಲೆ ಎದ್ದು ಸ್ನಾನಕ್ಕೆ ನೀರು ಬಿಸಿಯಾಗಲಿಟ್ಟು ಬಂದೆ. ಮತ್ತೊಮ್ಮೆ ೫.೧೫ಕ್ಕೆ ಅಲಾರಂ ಸೆಟ್ ಮಾಡಿ ಮಲಗಿದೆ. ಮತ್ತೊಮ್ಮೆ ಅದು ಕೂಗಿಕೊಳ್ಳಲು ತುಂಬಾ ಹೊತ್ತಾಗಲಿಲ್ಲ. ಎದ್ದು ಕಾದಿದ್ದ ನೀರನ್ನು ಹೊತ್ತೊಯ್ದು ಸ್ನಾನಾದಿಗಳನ್ನು ಮುಗಿಸಿಕೊಂಡೆ. ಕುಡಿಯುವ ನೀರನ್ನು ಬಾಟಲಿಯೊಂದಕ್ಕೆ ತುಂಬಿಸಿಕೊಂಡು, ಎರಡು ದಿನದ ಹಿಂದೆಯಷ್ಟೇ ಒಗೆದಿಟ್ಟ ಆರು ವರ್ಷ ಹಳೆಯ ಹ್ಯಾಟು ಮತ್ತು ಒಂದು ಟವೆಲ್ ಎಲ್ಲವನ್ನೂ ಬ್ಯಾಗೊಂದರಲ್ಲಿ ಹಾಕಿಕೊಂಡು ಮೊಬೈಲಿನಲ್ಲಿ ಗಂಟೆ ನೋಡಿದಾಗ ೫.೪೫ ತೋರಿಸುತ್ತಿತ್ತು. ನನ್ನ ವಾಚಿಗೆ ಚಳಿ ಜೋರಾಗಿ ಅದು ಯಾವಾಗಿನ ವೇಗದಲ್ಲಿ ಓಡಲಾಗದೆ ಇನ್ನೂ ಮೂರೂವರೆ ತೋರಿಸುತ್ತಿತ್ತು. ಅದರ ಕಿವಿ ತಿರುಪಿ ಕೈಗೆ ಕಟ್ಟಿಕೊಳ್ಳುತ್ತಾ ಮನೆಯಿಂದ ಹೊರಬಿದ್ದೆ.
ಏಳು ಗಂಟೆಯೊಳಗೆ ಮೆಜೆಸ್ಟಿಕ್ ತಲುಪಬೇಕಿದ್ದವ ಆರೂವರೆಗಿಂತಲೂ ಮುಂಚೆ ತಲುಪಿದೆ. ಬೆಳಿಗ್ಗೆ ಬೇಗ ಎದ್ದಿದ್ದಕ್ಕೆ ಹಸಿಯುತ್ತಿದ್ದ ಹೊಟ್ಟೆಗೆ ಎರಡು ಇಡ್ಲಿ ತಿನ್ನಿಸಿ KSRTC ಯ ಮೂರನೇ ಟರ್ಮಿನಲ್ ಹುಡುಕುತ್ತಾ ನಡೆದೆ. ಹೊತ್ತು ಕಳೆಯಲು ದಿನಪತ್ರಿಕೆ ಕೊಳ್ಳೋಣ ಎಂದು ಅಂಗಡಿಯೊಂದರ ಬಾಗಿಲಿಗೆ ಹೋದೆ. 'ನಾಲ್ಕು ರೂಪಾಯಿ ಚಿಲ್ಲರೆ ಬೇಕು ಸಾರ್' ಎಂದವನಿಗೆ 'ಚಿಲ್ಲರೆ ಇಲ್ಲ ಸರ್' ಎನ್ನುತ್ತಾ ಎತ್ತಿಕೊಂಡಿದ್ದ ಪೇಪರನ್ನು ಅದರ ಜಾಗದಲ್ಲಿರಿಸಿ ಹತ್ತು ರೂಪಾಯಿ ನೋಟನ್ನ ಜೇಬಿಗೆ ವಾಪಸ್ಸು ತುರುಕುತ್ತಾ ಮುಂದೆ ಹೋದೆ. ಮತ್ತೊಂದು ಅಂಗಡಿ ಬಳಿ ಹೋಗುತ್ತಿದ್ದಂತೆಯೇ 'ಏನು ಬೇಕ್ ಸಾರ್ ?' ಎಂದ ಅಂಗಡಿಯಾತ. ೧೦ ರೂಪಾಯಿ ಅವನ ಕೈಯಲ್ಲಿಟ್ಟು 'ಒಂದು ವಿಜಯವಾಣಿ' ಅಂದೆ. ೫ ರೂಪಾಯಿ ಪಾವಲಿಯ ಜೊತೆ, ನಮ್ಮ ದೇಶದ ಹೊಸ ಕರೆನ್ಸಿಯಾದ ಚಾಕೊಲೇಟನ್ನು ಆತ ಕೊಡುವಷ್ಟರಲ್ಲಿ ಒಂದು ಪೇಪರನ್ನು ನಾನು ಎತ್ತಿಕೊಂಡಿದ್ದೆ. ನಾಣ್ಯವನ್ನು ಕಿಸೆಗೆ ಸೇರಿಸಿ, ಚಾಕೊಲೇಟನ್ನು ಬಾಯಿಗೆ ಹಾಕಿಕೊಂಡವ ಅದರ ಕಾಗದವನ್ನು ಬ್ಯಾಗಿಗೆ ಹಾಕಿಕೊಂಡು ಮೂರನೇ ಟರ್ಮಿನಲಿನ ಮಾರ್ಗ ಹುಡುಕುತ್ತಾ ನಡೆದೆ.
ಮೂರನೇ ಟರ್ಮಿನಲ್ ಏನೋ ಸಿಕ್ಕಿತು. ಆದರೆ ಟ್ರೆಕ್ಕಿಂಗಿಗೆ ಹೊರಟವರೆಲ್ಲರೂ ಭೇಟಿಯಾಗುವ ತಾವು ಎರಡನೇ ಟರ್ಮಿನಲ್ಲೋ ಅಥವಾ ಮೂರನೆಯದೋ ಎಂಬ ಅನುಮಾನ ಶುರುವಾಯ್ತು. ಈ ಅನುಮಾನವೂ ಸುಮ್ಮನೆ ಹುಟ್ಟಿಕೊಂಡಿದ್ದಲ್ಲ. ಟ್ರೆಕ್ಕಿಂಗಿನ ಸಂಘಟಕರು ಕಳಿಸಿದ್ದ ಈ-ಮೇಲ್ ನಲ್ಲಿ ಟರ್ಮಿನಲ್ ಮೂರು ಎಂದು ಸ್ಪಷ್ಟವಾಗಿ ಬರೆದಿದ್ದರೂ ಅವರು ಒದಗಿಸಿದ್ದ ಮಾರ್ಗ ನಕ್ಷೆ ಟರ್ಮಿನಲ್ ಎರಡನ್ನು ಸೂಚಿಸುತ್ತಿತ್ತು. ಅವರಲ್ಲಿ ಯಾರೊಬ್ಬರ ಮೊಬೈಲ್ ನಂಬರು ನನ್ನ ಬಳಿ ಇರದಿದ್ದುದರಿಂದ ಅವರು ಏಳು ಗಂಟೆಗೆ ಕರೆ ಮಾಡಿಯಾರೇ ಎಂಬ ಆಲೋಚನೆ ಶುರುವಾಗಿತ್ತು. ಗಂಟೆ ಏಳಾಗಲು ಇನ್ನೂ ಸಮಯವಿದ್ದರಿಂದ ಯೋಚನೆಯನ್ನು ಕಡಿಮೆ ಮಾಡಿ, ಕ್ರೀಡಾ ಸುದ್ದಿಯಿಂದ ಶುರುಮಾಡಿ ಸ್ವಲ್ಪ ಪೇಪರ್ ಓದಿದೆ. ನಂತರ ಪ್ಲಾಟ್-ಫಾರಮ್ಮಿನ ಮೇಲಿದ್ದ ಒಂದೊಂದೇ ಫಲಕಗಳತ್ತ ದೃಷ್ಟಿ ಹಾಯಿಸತೊಡಗಿದೆ. ಒಂದು ಫಲಕದ ಮೇಲೆ ಚಿಕ್ಕಬಳ್ಳಾಪುರ ಎಂದು ಬರೆದಿದ್ದು ಕಂಡಾಗ ಸಮಾಧಾನವಾಯ್ತು. ಎಲ್ಲರೂ ಅಲ್ಲಿಗೇ ಬರುವರೆಂದು ನನಗೆ ನಾನೇ ಧೈರ್ಯ ಹೇಳಿಕೊಂಡು, ದಿನಪತ್ರಿಕೆಯ ಬೇರೆ ಪುಟಗಳತ್ತ ಕಣ್ಣು ಹಾಯಿಸಿದೆ.
ಏಳು ಗಂಟೆ ಕಳೆಯುವಷ್ಟರಲ್ಲಿ ಎಂಟ್ಹತ್ತು ಜನ ಒಂದೆಡೆ ಕಲೆತು ನಿಂತಿದ್ದು ಕಾಣಿಸಿತು. ಅತ್ತ ಹೋಗಿ ಒಬ್ಬರಲ್ಲಿ ಅದು ಚನ್ನಗಿರಿ(ಚೆನ್ನಗಿರಿ) ಟ್ರೆಕ್ ಹೋಗುವ ತಂಡವೇ ಎಂಬುದನ್ನು ಖಾತ್ರಿಪಡಿಸಿಕೊಂಡು, ಒಬ್ಬೊಬ್ಬರದೇ ಕೈಕುಲುಕುತ್ತಾ ಅವರ ಹೆಸರು ಕೇಳಿ, ನನ್ನದನ್ನೂ ಹೇಳಿಕೊಂಡೆ. ನನ್ನ ನಂತರ ಬಂದು ಸೇರಿದ ಮೂರ್ನಾಲ್ಕು ಮಂದಿಯೂ ಅದನ್ನೇ ಮಾಡಿದರು. ಆದರೂ ಎಲ್ಲ್ಲರ ಪರಿಚಯ ಎಲ್ಲರಿಗೂ ಅಷ್ಟಾಗಿ ಆಗಿರಲಿಲ್ಲ. ಯಾರು ಹೇಗೋ, ಏನೋ ಎಂಬ ಭಯವಿಲ್ಲದಿದ್ದರೂ ದಾಕ್ಷಿಣ್ಯದ ಕಾರಣ ಆಗ ಹೆಚ್ಚು ಮಾತುಕತೆಯಾಗಲಿಲ್ಲ. ಬರುವವರೆಲ್ಲರೂ ಜಮಾಯಿಸಿದ ನಂತರ ಬಸ್ಸು ಹತ್ತಿದೆವು. ತಮ್ಮ ತಮ್ಮ ಮಧ್ಯೆ ಮೊದಲಿನಿಂದ ಪರಿಚಯವಿದ್ದ ನಾಕು ಮಂದಿ ಹರಟೆ ಕೊಚ್ಚುತ್ತಾ ಕುಳಿತಿದ್ದರು. ಪಕ್ಕದಲ್ಲಿ ಕುಳಿತವರು ಒಂದೆರಡು ಮಾತನ್ನಾಡಿದ್ದಕ್ಕೆ ತಕ್ಕಷ್ಟು ಉತ್ತರ ಕೊಟ್ಟು ನಾನು ಸುಮ್ಮನಾಗುತ್ತಿದ್ದೆ. ಮೊದಲೇ ಆನ್-ಲೈನ್ ನಲ್ಲಿ ಓದಿದ್ದ ನೀತಿ ನಿಯಮಗಳನ್ನು ಅವರು ಮತ್ತೊಮ್ಮೆ ಹೇಳಿದಾಗ 'ನಂಗೆ ಗೊತ್ತು, ವೆಬ್ ಸೈಟ್ ನಲ್ಲಿ ನೋಡಿದ್ದೆ' ಎಂದೆನ್ನದೇ, ಅವರ ಮಾತಿಗೆ ಹ್ಞೂಗುಟ್ಟುತ್ತಿದ್ದೆ. ಸ್ವಲ್ಪ ಹೊತ್ತಿನಲ್ಲಿ ಅವರಿಗೂ ಬೇಜಾರಾಯ್ತೋ ಏನೋ, ಸುಮ್ಮನಾದರು. ನಾನು ಕಿಟಕಿಯಾಚೆ ನೋಡುತ್ತಾ ಕುಳಿತೆ.
ಹೊರಗಿನಿಂದ ಬೀಸುತ್ತಿದ್ದ ಚಳಿಗಾಳಿ ನನಗೆ ಹಿತವಾಗಿತ್ತು. ಆದರೆ ಪಕ್ಕದಲ್ಲಿ ಕುಳಿತವರಿಗೆ ತೊಟ್ಟಿದ್ದ ಸ್ವೆಟರನ್ನೂ ದಾಟಿ ಚಳಿ ಮುಟ್ಟಿಸುತ್ತಿತ್ತು. ಹಾಗಾಗಿ ಅವರ ಕೋರಿಕೆಯ ಮೇರೆಗೆ ಕಿಟಕಿಯ ಬಹುಭಾಗಕ್ಕೆ ಗಾಜನ್ನೆಳೆದು, ಸ್ವಲ್ಪ ಮಾತ್ರ ಗಾಳಿ ಬರುವಂತೆ ತೆರೆದು ಕುಳಿತೆ. ರಸ್ತೆಯನ್ನು ಹಿಂದೆ ತಳ್ಳುತ್ತಾ ಬಸ್ಸು ಮುಂದೆ ಸಾಗುತ್ತಿತ್ತು. ನಗರದಿಂದ ಹೊರ ಸಾಗಿದ ಬಳಿಕ ಅಲ್ಲಲ್ಲಿ ಮುಸುಕು ತುಂಬಿದ ವಾತಾವರಣವು ಚೆನ್ನಾಗಿತ್ತು. ಇಂತಹುದೇ ದೃಶ್ಯಾವಳಿಯನ್ನು ಹಿಂದೆ ಮಾಥೆರಾನಿನಲ್ಲಿ ನೋಡಿದ್ದರಿಂದ ಅಷ್ಟೇನೂ ಅದ್ಭುತ ಎಂದೆನಿಸಲಿಲ್ಲ. ಅತ್ತ ಮಾಥೆರಾನಿನ ಜೊತೆಗೇ ಮುಂಬಯಿಯ ನೆನಪೂ ಒತ್ತಿ ಬಂತು. ಸುಮಾರು ಒಂದೂವರೆ ವರ್ಷದ ಹಿಂದೆ ಭಂಡಾರಧಾರ ಪ್ರವಾಸ ಹೋಗಿದ್ದು, ಒಂದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರೂ ಒಡನಾಟ ಕಡಿಮೆಯಿದ್ದ ಅವರೊಂದಿಗೆ ಹೆಚ್ಚಿನ ಮಾತನಾಡದೆ ಟೆಂಪೋ ಟ್ರಾವೆಲ್ಲರಿನ ಹೊರಗೆ ತಲೆಹಾಕಿ ಕುಳಿತಿದ್ದ ಆ ದಿನಕ್ಕೂ, ಪರಿಚಯವೇ ಇಲ್ಲದಿರೋ ೧೫ ಮಂದಿಯೊಡನೆ ಹೋಗುತ್ತಿರೋ ಈ ದಿನಕ್ಕೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಅನ್ನಿಸಿದಾಗ ನನಗೇ ನಗು ಬಂತು. ಒಮ್ಮೆ ಎಲ್ಲರತ್ತ ಕಣ್ಣು ಹಾಯಿಸಿದೆ. ಕೆಲವರು ಸೀಟಿಗೊರಗಿದಲ್ಲಿಯೇ ನಿದ್ದೆ ಹೋಗಿದ್ದರೆ, ಇನ್ನೂ ಕೆಲವರು ಕಣ್ಣು ಬಿಟ್ಟುಕೊಂಡೇ ಎನೋ ಯೋಚಿಸುತ್ತಿದ್ದರು. ಮುಂದಿನ ಸೀಟಿನಿಂದ ಒಂದಿಷ್ಟು ಕಿಲಕಿಲ ಸದ್ದು ಕೇಳಿಸುತ್ತಿತ್ತು.
೮.೪೫ರ ಸುಮಾರಿಗೆ ಚಿಕ್ಕಬಳ್ಳಾಪುರ ತಲುಪಿದ ನಾವು ಉಡುಪಿ ಹೋಟೆಲೊಂದರಲ್ಲಿ ಬೆಳಗಿನ ಉಪಾಹಾರ ಮುಗಿಸಿ, ಮಧ್ಯಾಹ್ನಕ್ಕೆಂದು ಪಲಾವನ್ನು ಬುತ್ತಿ ಕಟ್ಟಿಕೊಂಡೆವು. ಅಲ್ಲಿಂದ ಖಾಸಗಿ ಬಸ್ಸೊಂದರಲ್ಲಿ ಹೊರಟು ನಂದಿಗ್ರಾಮಕ್ಕೆ ಹೋಗಿ ಅಲ್ಲಿಂದ ರಿಕ್ಷಾ ಹಿಡಿದು ಬೆಟ್ಟದ ಬುಡಕ್ಕೆ ತಲುಪಿದಾಗ ಗಂಟೆ ೧೦ ಸರಿದಿತ್ತು. ಬೆಟ್ಟದ ಬುಡದಲ್ಲೊಮ್ಮೆ ವರ್ತುಲಾಕಾರದಲ್ಲಿ ನಿಂತು ಎಲ್ಲರೂ ತಮ್ಮ ತಮ್ಮ ಪರಿಚಯ ಹೇಳಿಕೊಂಡಿದ್ದಾಯ್ತು. ಕನಿಷ್ಟ ಪಕ್ಷ ದೇಶದ ಕಾಲುಭಾಗವನ್ನಾದರೂ ಪ್ರತಿನಿಧಿಸುವಷ್ಟು ರಾಜ್ಯಗಳ ಟ್ರೆಕ್ಕಿಗಳು ಒಂದಾಗಿದ್ದೆವು. ಗುಜರಾತ್, ಮಧ್ಯ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು, ಬಿಹಾರಗಳಿಂದ ಕೆಲಸಕ್ಕಾಗಿ ಇಲ್ಲಿ ಬಂದವರೂ, ಬಂದು ಇಲ್ಲಿಯವರೇ ಆಗಿ ನೆಲೆ ನಿಂದವರೂ ಇದ್ದರು. ಹೊರಗಿಂದ ಬಂದವರು ಕನ್ನಡ ಕಲಿಯೋಲ್ಲ ಅಂದವರು ಯಾರು ಸ್ವಾಮಿ, ಚಿಕ್ಕಂದಿನಲ್ಲಿಯೇ ಬಿಹಾರದಿಂದ ಬೆಂಗಳೂರಿಗೆ ಬಂದು, ಇಂದು ಮನೆಮಾತಾಗಿಯೂ ಕನ್ನಡವನ್ನೇ ಮಾತಾಡುವ ಆ ಹುಡುಗನನ್ನು ಕಾಣಬೇಕು ನೀವು. ಸಂಘಟಕರು ಮತ್ತೊಮ್ಮೆ ನಿಯಮಗಳನ್ನುಸುರಿಯಾದ ಮೇಲೆ ಚೆನ್ನಗಿರಿ ಬೆಟ್ಟ ಹತ್ತಲಾರಂಭಿಸಿದೆವು.
ಸಂಘಟಕರಲ್ಲೊಬ್ಬ ಮುಂದಾಳಾಗಿ ದಾರಿ ತೋರುವವನಂತೆ ಸಾಗುತ್ತಿದ್ದರೆ, ಇನ್ನೊಬ್ಬಾಕೆ ಹಿಂದಾಳಾಗಿ ಎಲ್ಲರೂ ಮುಂದೆ ಸಾಗಿದುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದರು. ಒಂದಿಷ್ಟು ದೂರ ನಡೆದು, ಸುಸ್ತಾದಲ್ಲಿ ಅಲ್ಲಲ್ಲಿ ಕುಳಿತು, ಹೊತ್ತು ತಂದಿದ್ದ ನೀರ ಕುಡಿದು, ಅವರಿವರು ತಂದಿದ್ದ ಚಾಕೊಲೇಟು ಕ್ಯಾಂಡಿಗಳನ್ನು ಮೆದ್ದು, ಇದ್ದ ಇಬ್ಬರು ಫೋಟೋಗ್ರಾಫರುಗಳಿಗೆ ಪೋಸುಕೊಟ್ಟು, ಇವೇ ಮಾಡುತ್ತಾ ಮೇಲೆ ಸಾಗಿದೆವು. ಅರ್ಧಕ್ಕಿಂತಲೂ ಹೆಚ್ಚು ಭಾಗ ಸುಲಭವಾಗಿ ಕಂಡಿದ್ದ ಆ ಬೆಟ್ಟದ ಮೇಲಿನ ನಡಿಗೆಯಲ್ಲಿ ಕಡೆ ಕಡೆಗೆ ಕಾಲು ಕಿತ್ತು ಕೈಗೆ ಬಂದಂತೆನಿಸುತ್ತಿತ್ತು. ಅದರ ಜೊತೆ ಜೊತೆಗೆ ಚುಚ್ಚಿ ನಿಲ್ಲುವ ಚುಂಗು (ಒಂದು ತರದ ಮುಳ್ಳು) ಬೇರೆ. ಒಂದಿಷ್ಟು ದೂರ ಬಿರಬಿರನೆ ಸಾಗಿ, ಶೂ ಮತ್ತು ಸಾಕ್ಸುಗಳಲ್ಲಿ ಹೊಕ್ಕಿ ಕುಳಿತ ಚುಂಗು ಬಿಡಿಸುತ್ತಾ, ಉಳಿದವರಿಗಾಗಿ ಕಾಯುತ್ತಾ ಕೊನೆಗೂ ೧೨.೩೦ ರ ಸುಮಾರಿಗೆ ತುತ್ತತುದಿ ಮುಟ್ಟಿದೆವು.
ಹನುಮಾನ್ ಮಂದಿರದ ನೆರಳಿನಲ್ಲಿ ಬಟ್ಟೆ ಬರೆಗಳಿಗೆ ಅಂಟಿಕೊಂಡಿದ್ದ ಮುಳ್ಳುಗಳನ್ನು ಬಿಡಿಸಿಕೊಳ್ಳುತ್ತಾ ದಣಿವಾರಿಸಿಕೊಂಡೆವು. ಒಬ್ಬೊಬ್ಬರೇ ತಾವು ತಂದ ತಿಂಡಿ ಪೊಟ್ಟಣಗಳನ್ನು ಬಿಚ್ಚತೊಡಗಿದರು. ಬಿಸ್ಕತ್ತು, ಚಿಪ್ಸ್ ಇವೇ ಮೊದಲಾದ ಕುರುಕುತಿಂಡಿಗಳನ್ನು ತಿಂದಾದ ಮೇಲೆ ಹೊತ್ತು ತಂದ ಬುತ್ತಿ ಬಿಚ್ಚಿ ಪಲಾವ್ ತಿಂದಾಯ್ತು. ಬೆಟ್ಟ ಹತ್ತಿ ದಣಿದುದಕ್ಕೋ, ಹೊಟ್ಟೆ ತುಂಬಿದುದಕ್ಕೋ ಹೆಚ್ಚಿನವರಿಗೆ ಅಲ್ಲೇ ನಿದ್ದೆ ಬರುವಂತಾದ್ದರಿಂದ ಯಾವುದೇ ಚಟುವಟಿಕೆಗಳು ಅಲ್ಲಿ ನಡೆಯಲಿಲ್ಲ. ಬೆಟ್ಟದ ತುದಿಯಲ್ಲೂ ಒಂದಿಷ್ಟು ಫೋಟೋಗ್ರಫಿ ಆಯ್ತು. ನಾನೂ ಒಬ್ಬ ರೂಪದರ್ಶಿಯಂತೆ ಪೋಸು ಕೊಟ್ಟೆ. ಬಳಿಕ ಅಲ್ಲೇ ಬೆಟ್ಟದ ಮೇಲೆ ಒಂದಿಷ್ಟು ಸುತ್ತಿ ಬಂದೆ. ನಾವು ಕುಳಿತಿದ್ದ ಗುಡಿಯ ಸಮೀಪದಲ್ಲಿಯೇ ಒಂದು ಸಣ್ಣ ಕೊಳವಿತ್ತು. ಅದರ ದಂಡೆಯಲ್ಲಿ ಒಂದು ಪುಟ್ಟ ಗುಡಿ. ಅದರ ಒಳಗೆ ಲಿಂಗರೂಪದಲ್ಲಿ ಶಿವನ ವಾಸ. ಮುಂಬಾಗಿಲ ಮೇಲಿದ್ದ ೧೯೩೭ ಎಂಬ ಸಂಖ್ಯೆ ನೋಡಿ ಆ ಗುಡಿಗೆ ೭೭ರ ಹರೆಯ ಎಂದುಕೊಂಡೆ. ಅಲ್ಲಿ ಇದ್ದ ಒಬ್ಬ ಹುಡುಗ ಎಲ್ಲಿಂದ ಬಂದಿದ್ದು, ಎಷ್ಟು ಜನ ಮೊದಲಾಗಿ ಒಂದಿಷ್ಟು ಪ್ರಶ್ನೆಗಳನ್ನು ಕೇಳಿದ. ಕೊನೆಗೆ ಸಮೀಪದಲ್ಲಿ ಇನ್ನೊಂದು ಮಾರುತಿ ಮಂದಿರ ಇದೆಯೆಂದೂ, ನೋಡಿ ಬನ್ನಿರೆಂದೂ ಹೇಳಿದ. ಅವನಿಂದ ಬೀಳ್ಕೊಂಡು ನಾನು ಮತ್ತೆ ತಂಡವನ್ನು ಸೇರಿಕೊಂಡೆ.
ಅವರಾಗಲೇ ಕುಳಿತಲ್ಲಿಂದಲೇ ಗುಡಿಯನ್ನು ನೋಡುತ್ತಾ, ಅದರ ಪಾಳುಬಿದ್ದ ಅವಸ್ಥೆಯನ್ನು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದರು. ಅದಕ್ಕೆ ಅವರಿಟ್ಟ ಚಂದದ ಹೆಸರು 'ಭೂತದ ಬಂಗಲೆ'. ನಾನು ಇದ್ದ ವಿಷಯ ಅವರಿಗೆ ತಿಳಿಸಿದೆ. ಕೆಲವರು ‘ನಾವು ನಾಸ್ತಿಕರು, ಅದನ್ನು ನೋಡಬೇಕೆಂಬ ಆಸಕ್ತಿ ತಮಗಿಲ್ಲ’ ಎಂದರು. ಒಬ್ಬಾತನಿಗೆ ತನಗೆ ನೆರಳು ಕೊಟ್ಟ ಒಬ್ಬ ದೇವರೇ ಸಾಕಿತ್ತು. ಮತ್ತೊಂದಿಷ್ಟು ಮಂದಿ ಹೋಗಿ ಗುಡಿಯನ್ನು ನೋಡಿ ಬಂದರು. ಪಾಪ, ತಮಗೆ ನೆರಳು ಕೊಟ್ಟಿದ್ದು ಯಾರದೋ ನಂಬಿಕೆಯ ಮೇಲೆ ನಿಂತ ಒಂದು ಗುಡಿ ಎಂಬುದು ಆ ಹೊತ್ತಿನಲ್ಲಂತೂ ನಾಸ್ತಿಕರೆಂದು ಕರೆದುಕೊಂಡವರ ಅರಿವಿಗೆ ಬಂದಂತಿರಲಿಲ್ಲ. ಎಲ್ಲರೂ ಮರಳಿದೊಡನೆ ಮತ್ತೊಂದಿಷ್ಟು ಗ್ರೂಪ್ ಫೋಟೋಗಳೂ ಆದ ಮೇಲೆ ಹಿಂದೆ ಹೆಜ್ಜೆ ಹಾಕಿದೆವು. ಹತ್ತುವಾಗಕ್ಕಿಂತ ಇಳಿಯುವುದು ಸುಲಭವಾಗಿತ್ತು. ನಾವು ಮೂರ್ನಾಲ್ಕು ಮಂದಿ ವೇಗವಾಗಿ ಒಂದಿಷ್ಟು ದೂರ ನಡೆದು, ದಾರಿ ಕವಲೊಡೆಯುವಲ್ಲಿ ಉಳಿದವರಿಗಾಗಿ ಕಾಯುತ್ತಾ ಕೂರುತ್ತಿದ್ದೆವು. ಹತ್ತುವಾಗಲೇ ಕಾಲು ಉಳುಕಿಸಿಕೊಂಡ ಒಬ್ಬ ಮಿತ್ರರಿಗೆ ನೋವು ಸ್ವಲ್ಪ ಜೋರಾಗಿತ್ತು. ಜೊತೆಗೆ ಒಯ್ದಿದ್ದ ಪ್ರಾಥಮಿಕ ಚಿಕಿತ್ಸೆಯ ಕಿಟ್ ನಿಂದ ಸ್ಪ್ರೆ ಒಂದನ್ನು ಸಿಂಪಡಿಸಿ ನಡಿಗೆ ಮುಂದುವರಿಸಿದರು.
ಸುಮಾರು ಅರ್ಧ ಭಾಗ ಇಳಿದ ಬಳಿಕ ಬಂಡೆಯೊಂದರ ನೆರಳಲ್ಲಿ ಕುಳಿತು ವಿಶ್ರಮಿಸಿಕೊಳ್ಳುತ್ತಿದ್ದಾಗ ಟ್ರೆಕ್ಕಿಂಗಿಗೆ ಬಂದಿದ್ದವರೆಲ್ಲರ ಹೆಸರು ಹೇಳಬೇಕೆನ್ನುವ ಒಂದು ಆಟ ಆಡಲಾಯ್ತು. ಆದಿತ್ಯ, ಹಿರೆನ್, ದೀಪ್ತಿ, ಸುಚೇತಾ, ಅಶ್ವಿನಿ, ಪ್ರಸಾದ್, ಪ್ರಶಾಂತ್, ಸುಮಿತ್, ಸಂಜಯ್, ಸತ್ಯಂ, ಬ್ರಜೇಶ್, ರಘು, ಆಶಿಶ್, ಸತೀಶ್, ಸುರೇಶ್, ದೀಪಕ್. ಆಟದ ನೆಪದಲ್ಲೊಮ್ಮೆ ನನ್ನದೂ ಸೇರಿ ಎಲ್ಲರ ಹೆಸರು ನೆನಪಲ್ಲುಳಿಯುವಂತಾಯ್ತು. ಮುಂದೆ ನಡೆಯುತ್ತಾ, ಮಧ್ಯೆ ಕೂತಲ್ಲಿ ಜೊತೆಗಿದ್ದವರ ಹಿಂದಿನ ಚಾರಣದ ಅನುಭವಗಳನ್ನು ಕೇಳುತ್ತಾ, ನಾನು ಹೋದವುಗಳ ಬಗ್ಗೆ ನುಡಿಯುತ್ತಾ ಉಳಿದ ದೂರ ಕ್ರಮಿಸಿ ಬೆಟ್ಟದ ಬುಡಕ್ಕೆ ಬರುವಾಗ ಬೆಳಿಗ್ಗೆ ನಮ್ಮನ್ನು ಬಿಡಲು ಬಂದಿದ್ದ ರಿಕ್ಷಾಗಳು ನಮ್ಮನ್ನು ವಾಪಸ್ಸು ಕರೆದೊಯ್ಯಲು ಕಾಯುತ್ತಾ ನಿಂತಿದ್ದವು.
ರಿಕ್ಷಾದಲ್ಲಿ ನಂದಿ ಕ್ರಾಸಿಗೆ ಬಂದು, ಹೇಗೂ ಬೆಂಗಳೂರಿಗೆ ಅರ್ಧ ಗಂಟೆಗೊಂದು ಬಸ್ಸು ಇದೆ ಎಂದು ಗೊತ್ತಿದ್ದರಿಂದ ಮೊದಲು ಟೀ ಕುಡಿಯಲು ಹೋದೆವು. ಸಂಘಟಕರು ಆಗಲೇ ಇಂದಿನ ಪ್ರವಾಸಾನುಭವದ ಮರುಮಾಹಿತಿ ಪಡೆಯಲು ಮೊದಲಾದರು. ಹೆಚ್ಚಿನವರು ಟ್ರೆಕ್ಕಿಂಗ್ ಚೆನ್ನಾಗಾಯ್ತು, ಸಂಘಟಕರು ಚೆನ್ನಾಗಿ ನಡೆಸಿಕೊಂಡು ಹೋದರು ಎನ್ನುವುದು ಬಿಟ್ಟು ಬೇರೇನೂ ಹೇಳಲಿಲ್ಲ. ಈ ವಿಷಯದಲ್ಲಿ ನಾನೂ ಹೊರತಲ್ಲ. ಒಂದಿಬ್ಬರಿಂದ ತಂಡದ ಪರಿಚಯ ಬಸ್ಸಿನಲ್ಲಿ ಹೊರಡುವ ಮೊದಲೇ ಮಾಡಿಸಬೇಕಿತ್ತು, ಏನಾದರೂ ಆಟಗಳನ್ನಾಡಿಸಬೇಕಿತ್ತು ಎಂಬ ಒಂದೆರಡು ಸಲಹೆಗಳು ಬಂದುವು. ಸಂಘಟಕರು ಅವನ್ನು ಮುಕ್ತವಾಗಿ ಸ್ವೀಕರಿಸಿದರು. ಒಂದಿಷ್ಟು ಹರಟೆ, ಮಾತು, ಕುಚೋದ್ಯಗಳಾದ ಮೇಲೆ ಟೀ ಅಂಗಡಿಯಿಂದ ಹೊರ ಬಿದ್ದು ಬಸ್ಸಿಗಾಗಿ ಕಾಯುತ್ತಾ ನಿಂತೆವು.
ತುಂಬಿ ಬಂದ ಒಂದು ಬಸ್ಸನ್ನು ಬಿಟ್ಟು, ಸ್ವಲ್ಪ ಮಟ್ಟಿಗೆ ಜಾಗವಿದ್ದ ಮುಂದಿನ ಬಸ್ಸನ್ನು ಹೊಕ್ಕಿ ಬೆಂಗಳೂರಿನೆಡೆ ಹೊರಟೆವು. ಅಲ್ಲಿಯವರೆಗೆ ಪ್ರತಿಯೊಂದಕ್ಕೂ ಸಂಘಟಕರೇ ದುಡ್ಡು ತೆತ್ತಿದ್ದರು. ಬಸ್ಸಿನಲ್ಲಿ ಅಷ್ಟೂ ಖರ್ಚನ್ನು ಲೆಕ್ಕ ಹಾಕಿ ತಲಾ ಖರ್ಚು ೨೩೦ ರುಪಾಯಿ ಸಂಗ್ರಹಿಸಿದ್ದು ಚೆನ್ನಗಿರಿ ಚಾರಣ ಮುಗಿಯಿತೆಂಬುದರ ಸೂಚಕವಾಗಿತ್ತು. ಮುಂದೆ ಯಲಹಂಕದಲ್ಲಿ ನಾಲ್ವರು ಮಿತ್ರರನ್ನು ಬೀಳ್ಕೊಂಡು ಬಸ್ಸು ಮುಂದೆ ಸಾಗಿತು. ೭ ಗಂಟೆಯ ಹೊತ್ತಿಗೆ ನಾವು ಮೆಜೆಸ್ಟಿಕ್ ತಲುಪಿದೆವು. ಆ ಒಂದು ದಿನ ಒಬ್ಬರಿಗೊಬ್ಬರು ಕಟ್ಟಿಕೊಟ್ಟ ಸಂತೋಷದ ಕ್ಷಣಗಳಿಗೆ ಒಬ್ಬರಿಗೊಬ್ಬರು ಧನ್ಯವಾದಗಳನ್ನರ್ಪಿಸುತ್ತಾ, ಸಾಧ್ಯವಾದರೆ ಮುಂದಿನ ಚಾರಣಗಳಲ್ಲಿ ಭೇಟಿಯಾಗೋಣ ಎನ್ನುವ ಆಶಯದೊಂದಿಗೆ ನಮ್ಮ ನಮ್ಮ ಮನೆಯ ದಾರಿ ಹಿಡಿದೆವು.
ಬಸ್ಸು ಇಳಿದು ಮನೆ ಕಡೆಗೆ ಹೆಜ್ಜೆ ಹಾಕುವಾಗ ಕಾಲ್ಚೀಲದೊಳಗೆ ಹುದುಗಿದ್ದ ಚುಂಗುಗಳು ಚುಚ್ಚಿ-ಚುಚ್ಚಿ ಇಡೀ ದಿನವನ್ನು ಮತ್ತೆ ಮತ್ತೆ ನೆನೆಸುತ್ತಿದ್ದವು. ಕೈ ಕಾಲುಗಳ ಮೇಲೆ ಕೆಂಪನೆಯ ಗುರುತು ಮಾಡಿದ್ದ ಆ ಮುಳ್ಳುಗಳ ನೆನಪುಗಳು ಮರೆಯುವ ಮುನ್ನ ನಿಮ್ಮೊಂದಿಗೆ ಹಂಚಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಾ ನಿದ್ದೆಗೆ ಜಾರಿದೆ.
Written By : Deepak Gore
Organized By : Deepthy & Hiren
Date of event : 21st Dec, 2014
Place : Chikkabalapur
Pictures : BTC FB Page
Post a Comment